+91 8970533355,+91 9448144297,+91 9747371345 |

ಶ್ರೀ ಉಬರಂಗಳ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನ ಪೌರಾಣಿಕ ಹಿನ್ನೆಲೆ

ಪೌರಾಣಿಕ ಹಿನ್ನೆಲೆ


ಶ್ರೀ ಉಬರಂಗಳ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದ ಸನ್ನಿಧಿಯಲ್ಲಿ ದೇವ ಪ್ರಶ್ನೆಯಾಗಿ ಅಷ್ಟಮಂಗಲ ಸ್ವರ್ಣ ಪ್ರಶ್ನೆಯಿಟ್ಟು ಇದೇ ತಾ. 31-12-1969 ರಿಂದ ತಾ. 08-01-1970ರ ವರೆಗೆ ಶ್ರೀ ಪುದುಶ್ಶೇರಿ ವಿಷ್ಣು ನಂಬೂದ್ರಿ, ಕೇರಳ ಜ್ಯೋತಿಷ್ಯ ಪರಿಷತ್ ಅಧ್ಯಕ್ಷ ಇವರಿಂದ ಫಲಚಿಂತನೆ ಮಾಡಲು ಪ್ರಾರಂಭಿಸಿ, ಆ ಫಲ ಚಿಂತನೆ ಮುಗಿಯುವಲ್ಲಿಗೆ ಶ್ರೀ ದೇವರ ಉದ್ಭವದಿಂದ ಇಂದಿನ ವರ್ತಮಾನ ಕಾಲದ ವರೆಗಿನ ಸವಿವರವಾದ ದೊರೆತ ಸ್ಥಳ ಪುರಾಣ ಸಹಿತ ವಿಷಯಗಳು ಇಂತಿವೆ.

ಈ ಕಲಿಯುಗ ಪ್ರಾರಂಭವಾಗಿ ಇಂದಿಗೆ 5070 ವರ್ಷಗಳ ಹಿಂದಿನ ದ್ವಾಪರ ಯುಗದ 20,000  ವರ್ಷಗಳಷ್ಟು ಮೊದಲು ಈ ಪ್ರದೇಶದ ಈಗ ಈ ಕ್ಷೇತ್ರವು ತಲೆಎತ್ತಿ ನಿಂತಿರುವ, ಅನಾದಿಯಿಂದಲೂ ಶ್ರೀ ಶಾಸ್ತಾರನು ಉದ್ಭವಿಸಿದ ಕ್ರೂರ ವನ್ಯ ಮೃಗ ಪಕ್ಷಿ ಸರ್ಪಗಳ ನೆಲೆವೀಡಾದ ಅರಣ್ಯದ ಮಧ್ಯದ ಈ ಪವಿತ್ರ ಸ್ಥಳದಲ್ಲಿ ಶ್ರೀ ಪರಶುರಾಮ ಸ್ವಾಮಿಯು ಜಗನ್ನಿಯಾಮಕನಾದ ಶ್ರೀ ಭಗವಂತನನ್ನು ತಪಸ್ಸು ಮಾಡುತ್ತಿರಲು ಪ್ರಕಾಶಮಾನವಾದ ಒಂದು ದಿವ್ಯ ಜ್ಯೋತಿಯು ಉದಯವಾಯಿತು. ಈ ರೀತಿಯಲ್ಲಿ ಪ್ರತ್ಯಕ್ಷವಾದ ಈ ಜ್ಯೋತಿಯಲ್ಲಿ ಅಡಕವಾಗಿರುವ ಶ್ರೀ ಪರಮಾತ್ಮನ ಯಾವ ಶಕ್ತಿ ಇದಾಗಿರಬಹುದು ಎಂಬುದನ್ನು ಫಕ್ಕನೆ   ಮನಗಾಣದ ಶ್ರೀ ಸ್ವಾಮಿಯು ಸಾಕ್ಷಾತ್ ಮಹಾವಿಷ್ಣುವನ್ನೇ ಸಂಕಲ್ಪಿಸಿ ಧ್ಯಾನಿಸ ತೊಡಗಿದರು. ಆಗ ಅಲ್ಲಿಶಂಖ, ಚಕ್ರ, ಗಧಾ, ಪದ್ಮಧಾರಿಯಾದ ಮಹಾವಿಷ್ಣುವೇ ಪ್ರತ್ಯಕ್ಷನಾಗಿ ಅಲ್ಲೇ ಅದೃಶ್ಯನಾದುದನ್ನು ಕಂಡರು. ಆದರೆ ಆ ಪ್ರಕಾಶಮಾನವಾದ ಜ್ಯೋತಿಯು ಮೊದಲಿನ ಹಾಗೆಯೇ ಜ್ವಲಿಸುತ್ತಿತ್ತು. ಅಷ್ಟರಲ್ಲೇ ಸಮಾಧಾನವನ್ನು ಹೊಂದದ ಶ್ರೀ ಭಾರ್ಗವಾಚಾರ್ಯರು, ಅವರು ಸಂಕಲ್ಪಿಸಿದ ದೇವನು ಮಾಯವಾದುದರಿಂದ, ಆ ಜ್ಯೋತಿಯಲ್ಲಿ ಅಂತರ್ಲೀನವಾಗಿರುವ ದೇವರ ಶಕ್ತಿಯು ಯಾವುದೆಂದು ಪರೀಕ್ಷಿಸಲು ಪ್ರಾರಂಭಿಸಿ ಶ್ರೀ  ಶಾಸ್ತಾರನ ಮೂಲಸ್ಥಾನದ ಸನಿಹವೇ ಆದುದರಿಂದ ಆ ದೇವನೇ ಆಗಿರಬಹುದೆಂದು ನೆನೆಸಿ ಧ್ಯಾನಿಸಿದರು. ಕೂಡಲೇ ಆ ಪ್ರದೇಶದ ಅಧಿಕಾರವನ್ನು ಹೊಂದಿದ ಶ್ರೀ  ಶಾಸ್ತಾರದೇವನು ಆ ಜ್ಯೋತಿಯಿಂದ ಹುಟ್ಟಿ ಬಂದು ಆ ಸ್ಥಳದ ಪಶ್ಚಿಮ ದಿಕ್ಕಿನ ತನ್ನ ಮೂಲ ಸ್ಥಾನಕ್ಕೆ ಇಳಿದು ಹತ್ತಿ ಹೋಗುವುದನ್ನು ಕಂಡರು. ಈ ದೃಶ್ಯಗಳಿಂದ ಯೋಚನೆಗೀಡಾದ ಶ್ರೀ ಪರಶುರಾಮರು ಶ್ರೀ ಶಕ್ತಿ ಸ್ವರೂಪಳಾದ ದುರ್ಗಾ ಮಾತೆಯನ್ನು ಪ್ರಾರ್ಥಿಸಿ ಧ್ಯಾನಿಸ ತೊಡಗಿದಾಗ ಸರ್ವ ಶಕ್ತಳಾದ ಶ್ರೀ ದುರ್ಗಾ ದೇವಿಯು ಪ್ರಸನ್ನಳಾಗಿ ಅಲ್ಲೇ ನಿಂತಿರುವುದನ್ನು ಕಂಡುದು ಮಾತ್ರವಲ್ಲದೇ, ಆ ಜ್ಯೋತಿಯ ಕಾಲಂಶ ಪ್ರಭೆಯು ಕಡಿಮೆಯಾದಾಗ ಅದರ ಮರ್ಮವನ್ನು ಅರಿಯದೆ ಯೋಚಿಸತೊಡಗಿದರು. ಉಳಿದಾಂಶವು ಮತ್ತೂ ಹಾಗೆಯೇ ಪ್ರಕಾಶಿಸುತ್ತಿತ್ತು. ಆಶ್ಚರ್ಯ ಚಕಿತರಾದ ಶ್ರೀ ಭಾರ್ಗವರಿಗೆ ಅದನ್ನು ಪರೀಕ್ಷೆ ನಡೆಸಿಯೇ ತೀರಬೇಕೆಂಬ ಕುತೂಹಲವು ಹೆಚ್ಚಿ ಸರ್ವಾಲಂಕಾರಭೂಷಿತೆಯಾದ ಶ್ರೀ ಪಾರ್ವತಿ ದೇವಿಯೇ ಇದಾಗಿರಬಹುದೆಂದು ಭಾವಿಸಿ ಪ್ರಾರ್ಥಿಸತೊಡಗಿದಾಗ ಶ್ರೀ ಪಾರ್ವತಿ ದೇವಿಯು ಪಸನ್ನವದನಳಾಗಿ ಪ್ರತ್ಯಕ್ಷವಾದುದೂ ತಕ್ಷಣವೇ ಜ್ಯೋತಿಯಲ್ಲಿ ಕಾಲಂಶ ಮಾತ್ರ ಉಳಿದು, ಉಳಿದಾಂಶ ಕಾಣದಾಯಿತು. ಈ ಮೊದಲೇ ಅಲ್ಲಿ ಉದ್ಭವಿಸಿದ ದುರ್ಗಾದೇವಿಯ ರೂಪವು ಶ್ರೀ ಪಾರ್ವತಿಯೊಂದಿಗೇ ಐಕ್ಯವಾದುದನ್ನು ಕಂಡಾಗ ಉಳಿದ ಕಾಲಂಶ ಜ್ಯೋತಿಯು ಶ್ರೀ ಪರಮೇಶ್ವರನೆಂದು ದೃಢಪಡಿಸಿ ಆತನನ್ನು ಸ್ತುತಿಸಿ ಧ್ಯಾನಿಸಿದರು. ಆ ಕ್ಷಣದಲ್ಲೇ ಶ್ರೀ ಪಾರ್ವತಿಯೊಂದಿಗೆ ಸಾಕ್ಷಾತ್ ಪರಮೇಶ್ವರನೇ ಪ್ರತ್ಯಕ್ಷವಾಗಿ ಶ್ರೀ ಭಾರ್ಗವಾಚಾರ್ಯರನ್ನು ಹರಸಿದರು. ಶ್ರೀ ಪರಶುರಾಮ ಸ್ವಾಮಿಯು ತನ್ನ ಇಷ್ಟಾರ್ಥ ನೆರೆವೇರಿತೆಂದು ಆನಂದ ತುಂದಿಲರಾಗಿ ಶ್ರೀ ಉಮಾಮಹೇಶ್ವರರನ್ನು ಪೂಜಿಸಿ ಕೃತಾರ್ಥರಾದರು. ಮಾತ್ರವಲ್ಲ, ಕಲಿಯುಗದ ಜನರು ದೇವಾಲಯ ನಿರ್ಮಿಸಿ ನಿನ್ನನ್ನು ಪೂಜಿಸಲಿ ಎಂದು ಪ್ರಾರ್ಥಿಸಿದರು. ಅಂದು ಪ್ರತ್ಯಕ್ಷವಾದ ಆ ಉಮಾಶಂಕರನೇ ಶ್ರೀ ಪರಶುರಾಮರ ಪ್ರೀತ್ಯರ್ಥ ಆ ಕಾಲದಲ್ಲಿ ಭಯಂಕರ ಅರಣ್ಯವಾಗಿದ್ದ ಈ ಪವಿತ್ರ ನೆಲದಲ್ಲಿ ಸ್ವಯಂಭೂವಾಗಿ ಲಿಂಗ ರೂಪದಲ್ಲಿ ಉದ್ಭವಿಸಿ, ಕಲಿಯುಗದ ಈ ಕಾಲದಲ್ಲಿ ಶ್ರೀ ಮಹಾಲಿಂಗೇಶ್ವರನೆಂದು ಹೆಸರು ಪಡೆದು ಶ್ರೀ ಪಾರ್ವತಿ, ಶ್ರೀ  ಶಾಸ್ತಾರ, ಶ್ರೀ ಗಣಪತಿ, ಶ್ರೀ ಸುಬ್ರಹ್ಮಣ್ಯ ಮೊದಲಾದ ದೈವಿಕ ಶಕ್ತಿಗಳನ್ನೊಳಗೊಂಡ ಪವಿತ್ರ ಕ್ಷೇತ್ರವಾಗಿದೆ ಎಂದು ತಿಳಿದು ಬಂದಿದೆ.

ಕಲಿಯುಗವು ಪ್ರಾರಂಭವಾಗಿ ಈ ಸೌಮ್ಯನಾಮ ಸಂವತ್ಸರಕ್ಕೆ 5070 ವರ್ಷಗಳಾದವು. ಅದರಲ್ಲಿ ಸುಮಾರು 2032 ವರ್ಷಗಳ ಮೊದಲು ಮನುಷ್ಯರು ಪ್ರವೇಶಿಸದ ವನ್ಯ ಮೃಗ, ಪಕ್ಷಿ, ಕ್ರೂರ ಸರ್ಪಗಳಿಂದಾವೃತವಾದ ಭಯಂಕರ ಕಾನನಾಂತರದೊಳಗೆ ಸ್ವಯಂಭುವಾಗಿ, ದ್ವಾಪರ ಯುಗದಲ್ಲಿ ಶ್ರೀ ಪರಶುರಾಮ ಸ್ವಾಮಿಯ ತಪಸ್ಸಿನ ಫಲವಾಗಿ ಉದ್ಭವಿಸಿದ ಮಹಾದೇವರಿಗೆ ಕಲಿಯುಗದ ಜನರಿಗೆ ಈ ಸ್ಥಳದಲ್ಲಿ ತಾನು ಇರುವುದನ್ನು ತಿಳಿಸುವ ಅಪೇಕ್ಷೆಯುಂಟಾಯಿತು. ಆಗ ಜನರು ಈ ಭಯಂಕರ ಕಾಡನ್ನು ಪ್ರವೇಶಿಸಿ ತನ್ನ ಇರವನ್ನು ತಿಳಿಯಲು ಒಂದು ಉಪಾಯವಾಗಿ ಮೂಡು ಭಾಗದಲ್ಲಿ ಸನಿಹದಲ್ಲೇ ಯುಗ ಯುಗಾಂತರಗಳಿಂದ ಹರಿಯುತ್ತಿರುವ ದೇವ ದೇವತೆಗಳ ಸ್ನಾನ ಘಟ್ಟವಾದ ಪವಿತ್ರ ನದಿಯ ತ್ರಿವೇಣಿ ಸಂಗಮದ ತಟಾಕದಲ್ಲಿ ಕೆಲವು ಬೇಟೆಗಾರ ಗಿರಿಜನರ ಕುಟುಂಬಗಳು ವಾಸಿಸುತ್ತಿದುದ್ದರಿಂದ, ಅವರ ಒಂದು ಕುಟುಂಬದಲ್ಲಿ ಒಂದು ಶಿವಗಣವನ್ನು ಮನುಷ್ಯನಾಗಿ ಜನನಕ್ಕೆ ಬರುವಂತೆ ಕರುಣಿಸಿದನು. ಅಲ್ಲಿ ಜನಿಸಿದ ಆತನು ಪ್ರಾಯಭರಿತನಾಗಿ ಬೇಟೆಯಾಡುತ್ತಿದ್ದ ಒಂದು ದಿನ ಒಂದು ವಿಶೇಷ ಪೂಜೆಯ ನಿಮಿತ್ತ ಮೊಲದ ಮಾಂಸಕ್ಕಾಗಿ ಶಿವ ಪ್ರೇರಣೆಯಿಂದ ಹೊರಡಲು ನಿಶ್ಚಯಿಸಿದನು. ಹಾಗೆ ಹೊರಟು ಅಲ್ಲಿಂದ ಪಶ್ಚಿಮಾಭಿಮುಖನಾಗಿ ಈ ವನದೊಳಗೆ ಪ್ರವೇಶಿಸಿದಾಗ, ಶ್ರೀ ದೇವರು ತನ್ನ ನಿಧಿ ಪಾಲಕ ಶಿವಭೂತವನ್ನು ಮೊಲದ ರೂಪದಲ್ಲಿ ಅವನೆದುರು ಅಡ್ಡಾಡಲು ಕಳುಹಿಸಿದನು. ಶಿವಭೂತವು ಆಜ್ಞೆಯನ್ನು ಶಿರಸಾ ವಹಿಸಿ ಮೊಲದ ರೂಪ ತಾಳಿ ಬೇಡನ ಹಿಂದು ಮುಂದು ಓಡಾಡತೊಡಗಿತು. ಮೊಲವು ಕಣ್ಣಿಗೆ ಬಿದ್ದ ಕೂಡಲೇ ಸಂತೋಷಗೊಂಡ ಬೇಡನು ಒಂದು ಉದ್ದವಾದ ದೊಣ್ಣೆಯನ್ನು ಹಿಡಿದುಕೊಂಡು ಮೊಲವನ್ನು ಹೊಡೆದು ಕೊಲ್ಲಲು ಹವಣಿಸುತ್ತಾ ಓಡಿಸುತ್ತಿದ್ದನು. ಬೇಡನನ್ನು ಹಿಂದೆ ಹಾಕಿ ಮೊಲವು ಕುಪ್ಪಳಿಸುತ್ತಾ, ಪಶ್ಚಿಮ ದಿಕ್ಕಿಗೇ ಸಾಗುತ್ತಿತ್ತು. ಬೇಡನು ಓಡುತ್ತಾ ಓಡುತ್ತಾ ಮೊಲವು ಹತ್ತಿರ ಕಾಣಸಿಕ್ಕಾಗ ಅದನ್ನು ಹೊಡೆಯಲು ಪ್ರಯತ್ನಿಸುತ್ತಿದ್ದನು. ಹೀಗೆ ಮೊಲವು ಆತನನ್ನು ಹುಚ್ಚು ಗಟ್ಟಿಸಿ ಶ್ರೀ ಮಹಾದೇವನು ಉದ್ಭವಿಸಿದ್ದ ಒಂದು ದಿಡ್ಡಿನ ಬುಡಕ್ಕೆ ತಂದಿತು. ಅಲ್ಲಿ ಮೊಲವು ಆತನ ಕೈಗೆಟಕುವಂತೆ ಕಾಣ ಸಿಗಲು, ಈಗ ಸಿಕ್ಕಿತು ಎಂಬ ಮನೋಭಾವದಿಂದ ತನ್ನಲ್ಲಿದ್ದ ಆಯುಧವನ್ನು ಎತ್ತಿ ಗುರಿಯಿಟ್ಟು ಹೊಡೆದನು. ಹೊಡೆತದಿಂದ ತಪ್ಪಿಸಿಕೊಂಡ ಮೊಲವು ತಟಕ್ಕನೆ ಎಡಕ್ಕೆ ಹಾರಿ ಮಾಯವಾಯಿತು. (ಮೊಲವು ಅದೃಶ್ಯವಾದ ಸ್ಥಳದಲ್ಲಿ ಈಗಲೂ ಆ ಕುರುಹು ಕಾಣುತ್ತಿದೆ). ಈ ಮೊಲವು ತನ್ನನ್ನು ವಂಚಿಸಿ ಅದೃಶ್ಯವಾದುದನ್ನು ಕಂಡು ಬೇಡನು ಇದೇನು ಮಾಯೆಯೆಂದು ಭಾವಿಸಿ, ಬೆದರಿ ಬೆಂಡಾಗಿ, ತಲೆಯೆತ್ತಿ ದಿಡ್ಡಿನ ಮೇಲ್ಬದಿಯನ್ನು ಕಂಡಾಗ ಅಲ್ಲಿಯ ದೃಶ್ಯದಿಂದ ಭಯಭೀತನಾಗಿ ಕದಲದೇ ನೋಡುತ್ತಾ ನಿಂತನು.

ರತ್ನಖಚಿತವಾದ ಉಯ್ಯಾಲೆಯಲ್ಲಿ ಕುಳಿತ ಕನಕ ರತ್ನಾಭರಣ ಭೂಷಿತೆಯೂ, ಪೀತಾಂಬರಧಾರಿಯೂ, ತುಂಬಿದ ಶರೀರದ ಪ್ರಾಯ ಪ್ರಬುದ್ಧೆಯೂ ಆಗಿ ಸುಮಾರು 16-18 ವರ್ಷ ಪ್ರಾಯದ ತೇಜೋಮಯಿಯಾಗಿ ಶೋಭಿಸುತ್ತಿದ್ದ ಸುಂದರ ಸ್ತ್ರೀರೂಪವನ್ನು ಕಂಡು ಚಕಿತನಾದನು. ಆ ಸ್ತ್ರೀ ಉಯ್ಯಾಲೆಯನ್ನು ಹಿಂದು ಮುಂದಕ್ಕೆ ಚಲಿಸುತ್ತಾ, ಎಡಬಲಗಳಲ್ಲಿ ರಾಶಿಯಾಗಿದ್ದ ಸಮುದ್ರ ರತ್ನಗಳನ್ನು ಕೈಗಳಲ್ಲಿ ಬಾಚಿ ಬಾಚಿ ತೆಗೆದು ಆಡುತ್ತಾ, ಸುತ್ತು ಮುತ್ತಲೂ ಪ್ರಕಾಶವನ್ನು ಬೀರುತ್ತಾ ಹರ್ಷ ಚಿತ್ತಳಾಗಿ ಕಂಡಳು. ಇವಳು ಯಾರಾಗಿರಬಹುದೆಂದು ಯೋಚಿಸುತ್ತಾ, ಕಣ್ಣ ರೆಪ್ಪೆಗಳನ್ನೂ ಸಹ ಕದಳಿಸದೇ ನೆಟ್ಟ ದೃಷ್ಟಿಯಿಂದ ಶ್ರೀ ಪಾರ್ವತಿ ದೇವಿಯ ಈ ನಯನ ಮನೋಹರ ದೃಶ್ಯದತ್ತ ಆಕರ್ಷಿತನಾದನು. ಅದೇ ವೇಳೆ ಆ ಉಯ್ಯಾಲೆಯ ಬಲಬದಿಯಲ್ಲಿ ಸ್ವತಃ ಸ್ವಯಂಭುವಾದ ಶ್ರೀ ಮಹಾಲಿಂಗೇಶ್ವರನು ಬೃಹತ್ ಸರ್ಪದ ರೂಪದಲ್ಲಿ ತನ್ನ ಹೆಡೆಯನ್ನು ಬಿಚ್ಚಿ ತಲೆಯೆತ್ತಿ ನೆಟ್ಟಗೆ ನಿಂತು ತನ್ನ ಪತ್ನಿಯು ಉಯ್ಯಾಲೆಯಾಡುತ್ತಿರುವುದನ್ನು ತನ್ನಲ್ಲೇ ಸಂತೋಷ ಪಡುತ್ತಾ ತನ್ನ ಹೆಡೆಯನ್ನು ಉಯ್ಯಾಲೆಯು ಚಲಿಸುತ್ತಿದ್ದ ಹಿಂದು ಮುಂದೂ ತಿರುಗಿಸುತ್ತಾ ನೋಡುತ್ತಿರುವ ಆ ದಿವ್ಯ ಸ್ವರೂಪವೂ ಸಹ ಕಣ್ಣಿಗೆ ಬಿದ್ದಾಗ “ಇದೇನು ಅದ್ಭುತ” ಎಂದು ಭಾವಿಸಿ ಭಯಭೀತನಾಗಿ, ಹೇಗಾದರೂ ಆ ಕಾಡಿನೊಳಗಿಂದ ಹೊರಬೀಳುವ ಅಪೇಕ್ಷೆಯಿಂದ ಸಿಕ್ಕಾಪಟ್ಟೆ ಓಡ ತೊಡಗಿದನು. 

 
ಹಾಗೆ, ಓಡೋಡಿ ಬಂದು ಆ ಕಾಡಿನ ಬದಿಯ ನಾಡಿನೊಳಗೆ ಪ್ರವೇಶಿಸಿ, ಜನರು ವಾಸಿಸುತ್ತಿದ್ದ ಒಂದು ಮನೆಯ ಬದಿಗೆ ಬಂದನು. ಆ ಮನೆಯ ಯಜಮಾನನು ಭಯಭೀತನಾಗಿ ನಡುಗುತ್ತಾ, ಓಡುತ್ತಾ ಬರುತ್ತಿದ್ದ ಬೇಡನನ್ನು ಕಂಡು ಹತ್ತಿರ ಕರೆದು “ಏನೆಂದು” ವಿಚಾರಿಸಿದನು. ಆಗ ಆತನು ಕಂಪಿಸುತ್ತಾ, ತತ್ತರಿಸುವ ನಾಲಗೆಯಿಂದ “ಉಉ-ಬ್ರಂ-ಗೊಳ” ಎಂಬ ಒಂದು ಶಬ್ದವು ಅವನ ಬಾಯಿಯಿಂದ ಹೊರಟಿತು. ಅದೇನೆಂದು ಆ ಮನೆಯ ಯಜಮಾನನಿಗೆ ಅರ್ಥವಾಗದೆ, ಗಾಬರಿಗೊಂಡ ಆ ಬೇಡನನ್ನು ಸಮಾಧಾನಪಡಿಸುತ್ತಾ ನಡೆದ ಸಂಗತಿ ಏನೆಂದು ತಿಳಿಯಲು ಪ್ರಯತ್ನಿಸಿದನು. ಆಗ ಆ ಬೇಡನು ಆ ಕಾಡಿನಲ್ಲಿ ಕಂಡ ದೃಶ್ಯವನ್ನು ಅವನ ಭಾಷೆಯಲ್ಲಿ ಸವಿವರವಾಗಿ ಹೇಳಿ, ಸ್ವಲ್ಪ ಧೈರ್ಯ ತಾಳಿ ತನ್ನ ನಿವಾಸವಾದ ನದಿಯ ಕಡೆಗೆ ಹೊರಟು ಹೋದನು. (ಆ ಬೇಡನು ಗಾಬರಿಪಟ್ಟು ಉಚ್ಚರಿಸಿದ ಆ ಶಬ್ದವೇ ಅಂದಿನಿಂದ ಆ ಪವಿತ್ರ ಸಾನಿಧ್ಯವಿರುವ ಸ್ಥಳದ ಹೆಸರಾಯಿತು).

ಬೇಡನಿಂದ ಈ ವಿಶೇಷ ವಿವರಗಳನ್ನು ತಿಳಿದ ಆ ಮನೆಯ ಯಜಮಾನನು ನಾಡಿನ ಮುಖ್ಯಸ್ಥನಲ್ಲಿಗೆ ಹೋಗಿ ಅವನಿಗೆ ವಿಷಯ ತಿಳಿಸಿದನು. ಆ ಕಾಲದಲ್ಲಿ ಈ ಹಳ್ಳಿಯ ರಾಜಾಧಿಕಾರವನ್ನು ಹೊಂದಿದ್ದ ಆ ವ್ಯಕ್ತಿ ಈ ಸಂಗತಿಗಳನ್ನು ಆ ಊರ ರಾಜನಲ್ಲಿಗೆ ಹೋಗಿ ತನ್ನ ನಾಡಿನ ಹತ್ತಿರದ ಕಾಡಿನಲ್ಲಿ ಬೇಡನಿಂದ ಕಂಡು ಕೇಳಿದ ವಾರ್ತೆಯನ್ನು ಅರುಹಿದನು. ರಾಜನು ಕುತೂಹಲಿಗನಾಗಿ ಅವನ ಅಧಿಕಾರಿಗಳೊಡನೆ ಸಮಾಲೋಚಿಸಿ ಈ ಹಳ್ಳಿ ನಾಡಿನ ಮುಖ್ಯಸ್ಥನೊಂದಿಗೆ ನೆರೆಕೆರೆಯ ಕೆಲವು ಪ್ರಧಾನ ವ್ಯಕ್ತಿಗಳನ್ನೂ, ಆ ಊರ ಪ್ರಮುಖ ಮನೆತನದ ತಾಂತ್ರಿಕಾಚಾರ್ಯರನ್ನೂ, ಪ್ರಸಿದ್ಧ ಜ್ಯೋತಿಷಿಗಳನ್ನೂ, ವೈದಿಕರನ್ನೂ ಕರೆದುಕೊಂಡು ಆ ಕಾಡಿನಲ್ಲಿ ಅಡಗಿರುವ ದೈವೀಕ ಶಕ್ತಿಯನ್ನು ಕಂಡು ಹಿಡಿಯಲು ಹೋಗುವುದೆಂದು ನಿರ್ಣಯಿಸಿ ಒಂದು ಸುದಿನವನ್ನು ಸಹ ಆರಿಸಿದನು. ಅಲ್ಲದೇ ಅ ಊರಿನ ಪವಿತ್ರ ನದಿಗಳಾದ ಭಾಸ್ವತೀ, ಚಂದ್ರಿಕಾ ಎಂಬೆರೆಡು ಪುಣ್ಯ ನದಿಗಳು ಸಂಗಮಗೊಂಡು ಅನಲಾ ನದಿಯು ಉದ್ಭವವಾಗುವ ತ್ರಿವೇಣ ಸಂಗಮದಲ್ಲಿ ಮಿಂದು ಅಲ್ಲಿಂದ ದೇವ ದರ್ಶನಕ್ಕೆ ಹೋಗುವುದೆಂದೂ, ದೇವ ದರ್ಶನ ಮಾಡಿ ಅಭಿಷೇಕ ಮಾಡಿ ಪೂಜಿಸಲು ತೀರ್ಥಜಲವನ್ನೂ ಅಲ್ಲಿಗೆ ಕೊಂಡು ಹೋಗಲು ಸಹ ನಿರ್ಣಯಿಸಿದನು. ಹಾಗೆ ಆ ಕಾಡಿನ ದೇವ ದರ್ಶನಕ್ಕೆ ಹೋಗಲು ನಿಶ್ಚಯಿಸಿದ ದಿನವೇ ಕುಂಭ ಮಾಸದ ಪವಿತ್ರ ಮಹಾಶಿವರಾತ್ರಿಯಾಗಿತ್ತು. ರಾಜನ ನಿರ್ಣಯದಂತೆ ರಾಜ ಪರಿವಾರದೊಂದಿಗೆ ಈ ಮೊದಲೇ ನಿಶ್ಚಯಿಸಿದ ಜನರೆಲ್ಲ ಆ ಊರ ಮುಖ್ಯಸ್ಥನೊಂದಿಗೆ ನದೀ ಸಂಗಮಕ್ಕೆ ಬಂದು, ಅಲ್ಲಿ ಸಂಕಲ್ಪ ಸ್ನಾನ ಮಾಡಿ, ಎಲ್ಲರೂ ತೀರ್ಥ ಜಲದೊಂದಿಗೆ ಪೂಜ-ಪೂಜ್ಯಾದಿಗಳಿಗೆ ಬೇಕಾದ ಇತರ ಸಾಮಾಗ್ರಿಗಳೊಂದಿಗೆ ವಾದ್ಯ ಘೋಷದಿಂದ ಕೂಡಿ ಜಯ ಜಯಕಾರದೊಂದಿಗೆ ಕಾನನದ ದಾರಿಯಾಗಿ ಬೇಡನಿಂದ ನಮೂದಿಸಲ್ಪಟ್ಟ ಆ ಸ್ಥಳಕ್ಕೆ ಬಂದರು.

ಅಲ್ಲಿ ಬಂದಾಗ, ಬೇಡನು ಹೇಳಿದ ಸುಂದರ ಸ್ತ್ರೀ ರೂಪವನ್ನೂ, ಅದರೊಂದಿಗಿದ್ದ ಮಹಾ ಸರ್ಪವನ್ನೂ ಕಾಣಲಿಲ್ಲ. ಆಗ ನಿರಾಶರಾದರೂ, ಅಲ್ಲಿ ಏನೋ ವಿಶೇಷ ಸಾನಿಧ್ಯ ಶಕ್ತಿ ಇದೆ ಎಂದು ತೋರಿ ಎಲ್ಲರೂ ಅಲ್ಲಿ ನಿಂತು ದೇವರನ್ನು ಧ್ಯಾನಿಸಿದರು. ಆಗ ಅವರೆದುರಿಗೇ ಹೆಡೆಬಿಚ್ಚಿ ನಿಂತು ಅವರನ್ನು ಅಹ್ವಾನಿಸುವಂತೆ ಒಂದು ವಿಶೇಷ ಸರ್ಪವನ್ನು ಹತ್ತಿರದಲ್ಲೇ ಕಂಡರು. ಆಗ ಭಯಭಕ್ತಿಯಿಂದ ಅವರೆಲ್ಲರೂ ಕೈಜೋಡಿಸಿ “ಈ ರೂಪದಿಂದ ಬಳಿಗೆ ಬರಲು ನಮಗೆ ಭಯವಾಗುತ್ತಿದೆ ದೇವಾ, ನಿಜ ರೂಪವನ್ನೇ ತೋರಿಸಿ ಕರುಣಿಸು” ಎಂದು ಪ್ರಾರ್ಥಿಸಿಕೊಂಡರು. ಕೂಡಲೇ ಸರ್ಪವೂ ಮಾಯವಾಗಿ ಆ ಸ್ಥಳದಲ್ಲಿ ಸ್ವಯಂಭುವಾದ ಲಿಂಗ ರೂಪವು ಕಾಣಿಸಿಕೊಂಡಿತು. ಜನರು ಮಹಾದೇವನು ಈ ರೀತಿ ತನ್ನ ದಿವ್ಯ ದರ್ಶನವನ್ನಿತ್ತುದಕ್ಕಾಗಿ ಬಹಳ ಸಂತೋಷಪಟ್ಟು, ರಾಜಾಜ್ಞೆಯಂತೆ ತಾವು ತಂದ ತೀರ್ಥ ಜಲವನ್ನು ತಂತ್ರಾಚಾರ್ಯರಿಂದಲೂ ವೈದಿಕರಿಂದಲೂ ವೇದಘೋಷಗಳೊಂದಿಗೆ ಅಭಿಷೇಕ ಮಾಡಿಸಿ, ಒಂದು ತುಪ್ಪದ ದೀಪವನ್ನು ಸಹ ಉರಿಸಿಟ್ಟು ಶ್ರೀ ಮಹಾದೇವನನ್ನು ಪೂಜಿಸಿದರು. ಪೂಜಾದಿಗಳನ್ನು ನಡೆಸಿ ಈ ಭಕ್ತ ವೃಂದವು ಪುನೀತರಾಗಿ ಭಕ್ತಿಯಿಂದ “ಹರಹರ ಶಿವಶಿವ-ಹರಶಂಭೋ ಮಹಾದೇವ” ಎಂಬುದಾಗಿ ಜಯಘೋಷದೊಂದಿಗೆ ದೇವನನ್ನು ಸ್ತುತಿಸಿದರು, ಮತ್ತು ಪ್ರಸಾದಾದಿಗಳನ್ನು ಸ್ವೀಕರಿಸಿ ಕೈ ಜೋಡಿಸಿ ನಿಂತು “ಆದಷ್ಟು ಬೇಗನೇ ಇಲ್ಲಿ ದೇವಾಲಯವನ್ನು ನಿರ್ಮಿಸಿ, ತಾಂತ್ರಿಕ ವಿಧಿಗಳಿಗನುಸರಿಸಿ ಬೇಕುಬೇಕಾದ ಎಲ್ಲಾ ಕ್ರಮಗಳನ್ನು ಮಾಡಿ ನಿನ್ನನ್ನು ಪೂಜಿಸಲು ಪ್ರಾರಂಭಿಸುತ್ತೇವೆ” ಎಂದು ಪ್ರಾರ್ಥಿಸಿ ಸಾಷ್ಟಾಂಗ ನಮಸ್ಕರಿಸಿ ಅಲ್ಲಿಂದ ಹೊರಟರು.

ಹಾಗೆ ರಾಜನ ಸಹಕಾರದೊಂದಿಗೆ ಊರ ಮುಖ್ಯಸ್ಥರೆಲ್ಲ ಸೇರಿ ಶಿಲ್ಪ ಶಾಸ್ತ್ರಜ್ಞರನ್ನು ಕರೆಸಿ ಅವರ ಆದೇಶದಂತೆ, ವಿಶ್ರಮಿಸದೇ ಬೃಹತ್ ಕಾಡನ್ನು ಕಡಿದು ದೇವಾಲಯ ನಿರ್ಮಾಣದ ಕೆಲಸವನ್ನು ಕೆಲವೇ ಕಾಲದಲ್ಲಿ ಮುಗಿಸಿ ಪೂಜಾ ವಿಧಿಗಳನ್ನು ಪ್ರಾರಂಭಿಸಿದಂದಿನಿಂದ ಇಲ್ಲಿ ಶ್ರೀ ಪಾರ್ವತಿ ಮಹಾಲಿಂಗೇಶ್ವರ ಕ್ಷೇತ್ರವು ತಲೆಯೆತ್ತಿ ನಿಂತಿತು. ಅಂದಿನಿಂದ ಉಬರಂಗಳದ ಈ ಕ್ಷೇತ್ರವು ಮಹಾ ಕ್ಷೇತ್ರವೆಂದು ಈ ನಾಡಿನಲ್ಲೇ ಹೆಸರಾಯಿತು.

ಊರ ಜನರು ರಾಜನನ್ನೊಳಗೊಂಡು ದೇವದರ್ಶನಕ್ಕೆಂದು ಹೋದಾಗ ಮೊದಲು ಬೇಡನಿಗೆ ಕಾಣಸಿಕ್ಕಿದ ಶ್ರೀ ಪಾರ್ವತಿ ದೇವಿಯು ಜನರು ಮಹಾದೇವನ ದರ್ಶನಕ್ಕೆ ಬರುವುದನ್ನು ತಿಳಿದು - ರಾಜಾಧಿರಾಜನಾದ ನಿನಗೇ ಈ ಊರಲ್ಲಿ ಪ್ರಾಧಾನ್ಯತೆ ಸಿಗಲಿ. ಅದಕ್ಕಾಗಿ ನಾನು ಇಂದು ನಿನ್ನೊಂದಿಗೆ ಜನರೆದುರು ಕಾಣಸಿಗುವುದಿಲ್ಲ. ಪಡುದಿಕ್ಕಿಗೆ ಮುಖ ಮಾಡಿ ನಿನ್ನ ಹಿಂಬದಿಯಲ್ಲಿ ತಿರುಗಿ ಕುಳಿತುಕೊಳ್ಳುತ್ತೇನೆ – ಎಂದು ಶ್ರೀ ಮಹಾದೇವನನ್ನು ಒಪ್ಪಿಸಿ, ಸ್ವಲ್ಪ ಹಿಂದಕ್ಕೆ ಸರಿದು ತಿರುಗಿ ಕುಳಿತಳು. ಹಾಗಾದುದರಿಂದ, ಬೇಡನ ವರ್ಣನೆಯಂತೆ ದರ್ಶನ ಲಾಭವನ್ನು ಪಡೆಯಲು ಬಂದ ಮಹಾಜನರಿಗೆ ಶ್ರೀ ಪಾರ್ವತಿಯ ದರ್ಶನವಾಗಲಿಲ್ಲ. ಆದರೂ ಈ ಕ್ಷೇತ್ರ ನಿರ್ಮಾಣ ಕಾಲದಲ್ಲಿ, ಇಲ್ಲಿ ಮುಕ್ಕಾಲು ಅಂಶ ಸಾನಿಧ್ಯ ಶಕ್ತಿಯು ಶ್ರೀ ಪಾರ್ವತಿಗೇ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರಿಂದ ತಿಳಿದುಬಂದು ಅವಳಿಗೂ ದೇವಾಲಯದಲ್ಲಿ ಅವಳು ಕುಳಿತಿರುವ ಭಾಗದಲ್ಲಿ ಪಶ್ಚಿಮಕ್ಕೆ ಮುಖ ಮಾಡಿ ಆಳೆತ್ತರದ ದಾರುಬಿಂಬವನ್ನು ಪ್ರತಿಷ್ಠಿಸಿ ಪೂಜಿಸತೊಡಗಿದರು. ಅಂದಿನಿಂದ ಈ ಕ್ಷೇತ್ರವು ಶ್ರೀ ಪಾರ್ವತೀ ಸಹಿತ ಶ್ರೀ ಮಹಾಲಿಂಗೇಶ್ವರ ಕ್ಷೇತ್ರವಾಯಿತು. ಪ್ರಥಮ ಸಲ ಕಾಡಿನೊಳಗಿದ್ದ ಸ್ವಯಂಭು ಲಿಂಗವನ್ನು ಜನರು ಯಾವ ತೀರ್ಥ ಜಲದಿಂದ ಅಭಿಷೇಕ ಮಾಡಿದರೋ, ಇಂದಿಗೂ ಆ ಮಹಾದೇವನು ತನ್ನ ಅಭಿಷೇಕಕ್ಕಾಗಿ ಅದೇ ಜಲವನ್ನು ಅಪೇಕ್ಷಿಸುತ್ತಿರುವನೆಂದೂ, ಅಂದು ಉರಿಸಲ್ಪಟ್ಟ ತುಪ್ಪದ ದೀಪವೇ ತನಗೆ ಪ್ರಿಯವಾದುದೆಂದೂ ಅವನ ಇಚ್ಛೆಯೆಂದು ತಿಳಿದು ಬಂದಿದೆ.

ಮೊದಲು ಈ ಕ್ಷೇತ್ರದಲ್ಲಿ 12 ದಿವಸಗಳ ಉತ್ಸವ ಜರಗುತ್ತಿತ್ತೆಂದೂ, ಉತ್ಸವದ ಅಖೈರಿ ಅವಭೃತ ಸ್ನಾನಕ್ಕೆ ಶ್ರೀ ದೇವರು ತ್ರಿವೇಣಿಸಂಗಮಕ್ಕೆ ಹೋಗುವ ಪದ್ಧತಿ ಇತ್ತೆಂದೂ ಹಳೇ ಕೆಲವು ಆಧಾರಗಳು ತಿಳಿಸುತ್ತವೆ. ಆ ತ್ರಿವೇಣಿ ಸಂಗಮದ ಬದಿಯ ವಿಶಾಲ ಶಿಲಾ ಪ್ರದೇಶದಲ್ಲಿ ಮುನಿ ಪುಂಗವರು ತಪಸ್ಸು ಮಾಡುತ್ತಿದ್ದರೆಂದು ಪ್ರತೀತಿ. ಅಲ್ಲಿ ಕಾಣುವ ಶಿಲೆಗಳ ಮೇಲೆ ಮುನಿಗಳ ಪಾದದ ಗುರುತುಗಳೂ ಇವೆ ಎಂದು ಕಂಡು ಬಂದಿದೆ. ಬದಿಯಲ್ಲೇ “ಮುನಿಯೂರು” ಎಂಬ ಊರು ಇದೆ. ನದೀ ಕಿನಾರೆಯಿಂದ ಇಲ್ಲಿ ಶ್ರೀ ಶಾಸ್ತಾರನ ಮೂಲ ಸ್ಥಾನವಾದ ಕಾಟುನೂಜಿ ಎಂಬಲ್ಲಿವರೆಗೆ ಮುನಿಗಳು ಶ್ರೀ ಶಾಸ್ತಾರನ ಮತ್ತು ಶ್ರೀ ಮಹಾದೇವನ ದರ್ಶನಕ್ಕೆಂದು ಬಂದು ಹೋಗುವ ಗುಹಾದ್ವಾರಗಳಿದ್ದವಂತೆ. ಅದರ ಕುರುಹುಗಳು ಈಗ ಮಣ್ಣು ಹಿಸಿದು ಬಿದ್ದು ಮುಚ್ಚಿಹೋಗಿದ್ದರೂ, ಕುರುಹು ಕಾಣುತ್ತಿವೆ. ಶ್ರೀ ಶಾಸ್ತಾರನು ಈ ಊರಲ್ಲಿ ಭಕ್ತ ಜನರ ಬಹಳ ಪ್ರೀತಿಯ ದೇವರಾಗಿದ್ದಾನೆ. ಜನರ ಇಷ್ಟಾರ್ಥವನ್ನು ಪೂರೈಸಿಕೊಡುವ ದೇವನೆಂದು ಆತನಿಗೆ ವಿಶೇಷ ಹರಕೆಗಳು ಸಹ ಬರುತ್ತಿವೆ. ‘ಪಾಟು’ ಎಂಬ ಸಂಪ್ರಾದಾಯದ ಉತ್ಸವವು ಶ್ರೀ ಶಾಸ್ತಾರನಿಗೆ ನಡೆಯುವುದು. ಶ್ರೀ ಭೂತಬಲಿ ಉತ್ಸವವು ಶ್ರೀ ಮಹಾದೇವನಿಗೆ ಸಲ್ಲುವುದು. ಶ್ರೀ ಮಹಾದೇವನ ಆಗಮನದ ಮೊದಲೇ ಶ್ರೀ ಶಾಸ್ತಾರನು ಈ ವನದೊಳಗೆ ಲಿಂಗ ರೂಪದಲ್ಲಿ ಉದ್ಭವಿಸಿರುವನು. ಇಂದೂ ಆ ವನಕ್ಕೆ ಹೋಗಿ ಆತನಿಗೆ ದಿನಾಲೂ ಪೂಜೆ, ನೈವೇದ್ಯಾದಿಗಳು ಸಲ್ಲುತ್ತವೆ. ಶ್ರೀ ಮಹಾದೇವ ಕ್ಷೇತ್ರದಿಂದ ಸುಮಾರು 1/4 ಮೈಲು ದೂರದಲ್ಲಿ ಈ  ವನವಿದೆ.

ಇಲ್ಲಿಯ ಶ್ರೀ ಉಮಾಮಹೇಶ್ವರ ದೇವಾಲಯ ನಿರ್ಮಾಣ ಕಾಲದಲ್ಲಿ ಆಗಿನ ಜನರಿಂದ ಒಂದು ಮಹತ್ತರವಾದ ತಪ್ಪು ಸಂಭವಿಸಿದೆ. ಯಾರು ದ್ವಾಪರ ಯುಗದ ಈ ದೇವನ ಉದ್ಭವಕ್ಕೆ ಕಾರಣರೋ, ಅವರಿಗೆ ಈ ದೇವಾಲಯದಲ್ಲಿ ಸ್ಥಾನ ಕೊಟ್ಟು ಪೂಜಿಸದೇ ಇರುವುದೇ ಪೂಜ- ಪೂಜ್ಯಾವ್ಯತಿಕ್ರಮ ದೋಷವಾಗಿದೆ. ಅವರಿಗೆ ಮನ್ನಣೆ ಕೊಡದೆ ಇದ್ದುದರಿಂದ ಆಚಾರ್ಯಪರಿಭವ ದೋಷ ತಟ್ಟಲಿ ಎಂದೂ, ಕ್ಷೇತ್ರ ನಿರ್ಮಾಣದ ಸಹಸ್ರ ಕಾಲ ನಂತರ ದೇವಾಲಯ ಅವನತಿ ಹೊಂದಿ ಈ ಊರ ಜನರಿಗೆ ಕ್ಷೇಮ ಸಿಗದಿರಲಿ ಎಂದೂ ಶಪಿಸಿದ್ದಾರಂತೆ. ಆದುದರಿಂದ ಶ್ರೀ ಪರಶುರಾಮ ಸ್ವಾಮಿ, ಶ್ರೀ ಗಣಪತಿ, ಶ್ರೀ ಸುಬ್ರಹ್ಮಣ್ಯ ಮೊದಲಾದ ದೇವರನ್ನು ಇಲ್ಲಿ ಪ್ರತಿಷ್ಠಿಸಿ ಪೂಜಿಸಬೇಕೆಂದೂ ಕಂಡು ಬಂದಿದೆ.
ಈ ಕ್ಷೇತ್ರ ಸುಮಾರು 354 ವರ್ಷಗಳ ಹಿಂದೆ ಮ್ಲೆಂಛರ ಹಾವಳಿಗೀಡಾಗಿ ಒಮ್ಮೆ ಅಗ್ನಿಬಾಧೆಗೊಳಗಾಗಿತ್ತು. ಆಗ ದೇವಾಲಯವು ಸಂಪೂರ್ಣ ನಾಶ ಹೊಂದಿ ಶ್ರೀ ಪಾರ್ವತಿ ದೇವಿಯ ದಾರುಬಿಂಬವು ಅಗ್ನಿಬಾಧೆಗೊಳಗಾಗಿ ನಾಶವಾಯಿತು. ಅನಂತರ ಶ್ರೀ ಪಾರ್ವತಿಯನ್ನು ಪ್ರತಿಷ್ಠಿಸದೇ ಇದ್ದುದೇ ಇಲ್ಲಿಯ ಜನರ ಕಷ್ಟ ನಷ್ಟಗಳಿಗೆ ಕಾರಣವಾಯಿತು ಮಾತ್ರವಲ್ಲದೇ, ದೇವಾಲಯದ ಸಾನಿಧ್ಯ ಶಕ್ತಿಗೂ ಕುಂದು ಬಂತೆಂಬುದು ಖಂಡಿತ.

ಇಲ್ಲಿಯ ಶ್ರೀ ಪಾರ್ವತಿ ದೇವಿಯು ಎಲ್ಲಾ ಭಕ್ತಾದಿಗಳ ಇಷ್ಟಾರ್ಥ ಸಿದ್ಧಿ ಮಾಡಿಕೊಡತಕ್ಕವಳು. ಅದರಲ್ಲೂ ದಾಂಪತ್ಯ ದೋಷ ಪರಿಹಾರಕ್ಕಾಗಿಯೋ, ದಶಾಸಂಧಿಕಾಲಕ್ಕಾಗಿಯೋ, ಪ್ರತ್ಯೇಕವಾಗಿ ಸ್ತ್ರೀಯರಿಗೆ ಮಾಂಗಲ್ಯ ವಿಯೋಗದಂತ ಕಷ್ಟ ಪರಿಹಾರಕ್ಕೂ, ಪುರುಷರಿಗೆ ಪತ್ನಿ ವಿಯೋಗದಂತಹ ದೋಷ ನಿವೃತ್ತಿಗೂ ಸರ್ವಾಲಂಕಾರ ಪ್ರಿಯೆಯಾದ ಶ್ರೀ ಪಾರ್ವತಿ ಮಾತೆಗೆ ಮಂಗಳಸೂತ್ರ, ಕಂಠಾಭರಣ ವಗೈರೆಗಳನ್ನು ಸಮರ್ಪಿಸಿ ತನಗೆ ಬರಬಹುದಾದ ಕಷ್ಟಗಳನ್ನು ಪರಿಹರಿಸಿ ಕೊಡಬೇಕೆಂದು ಪ್ರಾರ್ಥಿಸಿ ಪೂಜಿಸುತ್ತಾ ಬಂದಲ್ಲಿ ಅಂತಹವರ ಸಕಲ ಕಷ್ಟಗಳೂ ನಿವಾರಣೆ ಹೊಂದಿ ಅವರು ಭಾಗ್ಯವಂತರಾಗುವರೆಂಬುದೂ ಶ್ರೀ ಪಾರ್ವತಿ ದೇವರ ಮಹಾತ್ಮೆಗೆ ಸಾಕ್ಷಿಯಾಗಿದೆ.

(ಅಷ್ಟಮಂಗಲ ಪ್ರಶ್ನಾ ಚಿಂತನೆಯ ತಾತ್ಪರ್ಯ -  ಕೃಪೆ : ದಿ. ಉಬರಂಗಳ ಗೋಪಾಲಕೃಷ್ಣ ಕುಣಿಕುಳ್ಳಾಯ)